ಬೆಂಗಳೂರು: ಸುರಕ್ಷತೆಗೆ ಸಂಬಂಧಿಸಿದಂತೆ ಪಿಜಿಗಳಿಗೆ ಬಿಬಿಎಂಪಿಯಿಂದ ಶೀಘ್ರದಲ್ಲೇ ಮಾರ್ಗಸೂಚಿ ನಿಗದಿತ ಮಾನದಂಡಗಳನ್ನು ಅನುಸರಿಸಲು ವಿಫಲವಾದರೆ ಪಿಜಿಗಳ ವ್ಯಾಪಾರ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಸಿದೆ. ಬೆಂಗಳೂರು: ಕೆಲ ದಿನಗಳ ಹಿಂದೆ ಕೋರಮಂಗಲದಲ್ಲಿ ಪೇಯಿಂಗ್ ಗೆಸ್ಟ್(ಪಿಜಿ) ವಸತಿಗೃಹದಲ್ಲಿ ಯುವತಿಯೊಬ್ಬಳು ಹತ್ಯೆಯಾದ ನಂತರ, ಪಿಜಿ ಕೇಂದ್ರಗಳ ನಿರ್ವಹಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸಿದ್ಧವಾಗಿದೆ.ನಿಗದಿತ ಮಾನದಂಡಗಳನ್ನು ಅನುಸರಿಸಲು ವಿಫಲವಾದರೆ ಪಿಜಿಗಳ ವ್ಯಾಪಾರ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಸಿದೆ.ಒಂದೆರಡು ದಿನಗಳಲ್ಲಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುವುದು. ಮಾರ್ಗಸೂಚಿಗಳಲ್ಲಿ ನಿವಾಸಿಗಳ ಸಂಖ್ಯೆ ಮತ್ತು ಅವರ ಸುರಕ್ಷತೆಯ ಮೇಲೆ ಮಿತಿ ಇರುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ) ಸುರಲ್ಕರ್ ವಿಕಾಸ್ ಕಿಶೋರ್ ಅವರು ತಿಳಿಸಿದ್ದಾರೆ.ವಾರ್ಡ್ ಅಧಿಕಾರಿಗಳು ಕಾನೂನು ಮತ್ತು ಮಾರ್ಗಸೂಚಿಗಳ ಬಗ್ಗೆ ಮಾತನಾಡುತ್ತಿದ್ದರೆ, ನಿವಾಸಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಅಕ್ರಮ ಪಿಜಿ ವಸತಿಗಳ ವಿರುದ್ಧ ಸಮರ ಸಾರಿದ್ದಾರೆ.ವೈಟ್‌ಫೀಲ್ಡ್‌ನ ವಾರ್ಡ್ ಮಟ್ಟದಲ್ಲಿ, ವಸತಿ ಪ್ರದೇಶಗಳಲ್ಲಿ ನಿಯಮಗಳಿಗೆ ವಿರುದ್ಧವಾಗಿ ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ಪಿಜಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಮಾಲೀಕರು ಕಟ್ಟಡದ ಪ್ಲಾನ್ ಅಥವಾ ಯಾವುದೇ ಅನುಮೋದನೆ ಪಡೆಯದೇ ಅಂತಹ ಕಟ್ಟಡವನ್ನು ನಿರ್ಮಿಸುತ್ತಾರೆ. ಇದು ಮೂಲಸೌಕರ್ಯ ಮತ್ತು ಆಡಳಿತದ ಕುಸಿತಕ್ಕೆ ಕಾರಣವಾಗುತ್ತದೆ ಮತ್ತು ಜೀವನಶೈಲಿಯನ್ನು ನಾಶಪಡಿಸುತ್ತದೆ" ಎಂದು ಕಾರ್ಯಕರ್ತರೊಬ್ಬರು ಕಿಡಿ ಕಾರಿದ್ದಾರೆ.ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಪಿಜಿ ವಸತಿಗಳನ್ನು ನಿಯಂತ್ರಿಸುವ ಜವಾಬ್ದಾರಿಯು ಪುರಸಭೆಯ ಮೇಲಿದೆ ಮತ್ತು ಪೊಲೀಸರು ಅಂತಹ ಸ್ಥಳಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಮಾತ್ರ ಪರಿಶೀಲಿಸುತ್ತಾರೆ ಎಂದು ಹೇಳಿದ್ದಾರೆ.ಇತ್ತೀಚಿಗೆ ನಡೆದ ಯುವತಿಯೊಬ್ಬಳ ಹತ್ಯೆಯ ಹಿನ್ನೆಲೆಯಲ್ಲಿ ಪಿಜಿ ವಸತಿಗಳನ್ನು ನಡೆಸಲು ಮತ್ತು ನಿರ್ವಹಿಸಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಬಿಬಿಎಂಪಿ ಕಸರತ್ತು ನಡೆಸುತ್ತಿದೆ.